Soorya Purohit Karkala: ರಂಗೋಲಿ ಚಿತ್ರಕಲೆ ಬದುಕಿಗೆ ರಂಗು  ನೀಡಿತು: ಸೂರ್ಯ ಪುರೋಹಿತ್ ಕಾರ್ಕಳ 

 
ಕಲಾಸಕ್ತ ಕುಟುಂಬದ ಹಿನ್ನೆಲೆಯಿದ್ದ ನಾನು ಶ್ರೀ ದಾಸಪ್ಪ ಪುರೋಹಿತರಲ್ಲಿ ವೇದಾಭ್ಯಾಸ ಪೌರೋಹಿತ್ಯ ಕಲಿಯಲು ಕಟಪಾಡಿ ಶ್ರೀ ಕಾಳಿಕಾಂಬ ದೇವಸ್ಥಾನಕ್ಕೆ ಹೋದಾಗ ಪೌರೋಹಿತ್ಯದ ಜೊತೆಗೆ ಸಮಯ ಕಳೆಯಲು ದೇವಸ್ಥಾನದ ಗೋಡೆಯಲ್ಲಿ ತೈಲವರ್ಣ ಚಿತ್ರ ಬಿಡಿಸುತ್ತಾ ಚಿತ್ರಕಲೆಯಲ್ಲಿ ನೈಪುಣ್ಯತೆ ಗಳಿಸಿದೆ. ನಂತರ ಗುರುಗಳ ಜತೆಗೆ ಕಾರ್ಕಳಕ್ಕೆ ಬಂದಾಗ ರಂಗೋಲಿ ಚಿತ್ರಕಲೆಯತ್ತ ಆಕರ್ಷಿತನಾದೆ.  ಹೀಗೆ ಹವ್ಯಾಸವಾದ ರಂಗೋಲಿ  ಚಿತ್ರಕಲೆ ಬದುಕಿಗೆ ರಂಗು ನೀಡಿತು, ಎಂದು ಖ್ಯಾತ ರಂಗೋಲಿ ಚಿತ್ರಕಲಾವಿದ ಸೂರ್ಯಪುರೋಹಿತ್ ನುಡಿದರು.
 
ಅವರು  ರೇಡಿಯೋ ಸಾರಂಗ್'ನಲ್ಲಿ ಆಗಸ್ಟ್ 17ರಂದು ಬುಧವಾರ ನಡೆದ ಹೃದಯರಾಗ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ  ಮಾತನಾಡಿದರು.
 
 
 
ರಂಗೋಲಿ ಹೆಂಗಸರ  ಕಲೆಯೆಂದು  ಜನಜನಿತವಾದರೂ ಪುರುಷರು ಈ ಕಲೆಯಲ್ಲಿ ಸಾಧನೆ ಮಾಡಬಹುದು ಎಂದ ಇವರು ಕೊರೋನಾ ಸಂದರ್ಭದಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ರಚಿಸಿದ ರಂಗೋಲಿ  ಚಿತ್ರ 2021ರ ಇಂಡಿಯಾ ಬುಕ್ ಆಫ್ ರೆಕಾರ್ಡ್'ನಲ್ಲಿ ದಾಖಲಾಗಿದೆ, ಎಂದರು. ಇನ್ನು ಗಿನ್ನೆಸ್ ದಾಖಲೆ ಮಾಡುವ ಹಂಬಲವಿದೆ ಎಂದರು.
 
ಹಲವಾರು ಮಕ್ಕಳಿಗೆ, ಅಂಧಮಕ್ಕಳಿಗೆ ಉಚಿತವಾಗಿ ರಂಗೋಲಿ ಚಿತ್ರಕಲೆ ಕಲಿಸುತ್ತಿರುವ ಇವರು ಈ ಕಲೆ ಉಳಿಸಲು ಇದು ನನ್ನ ಅಳಿಲಸೇವೆ, ಎಂದರು. ಈಗೀಗ ಮನೆಗಳಲ್ಲಿ ಫ್ಲಾಟ್'ಗಳಲ್ಲಿ ರಂಗೋಲಿ  ಮಾಯವಾಗುತ್ತಿದೆ ಎಂದು ಬೇಸರಿಸಿದ ಇವರು ಮನೆ ಮುಂದೆ ರಂಗೋಲಿ ಶುಭಧಾಯಕ ಎಂದರು. ತ್ರಿಡಿ ರಂಗೋಲಿ ಬಗ್ಗೆ ತಿಳಿಸಿದ ಇವರು ನನ್ನನ್ನು ಎಲ್ಲರೂ 'ತ್ರಿಡಿ ರಂಗೋಲಿ' ಎಂದು ಗುರುತಿಸುತ್ತಾರೆ ಎಂದರು. ಇವರು ಹಲವಾರು ಚಿತ್ರನಟರ, ಯತಿಗಳ, ಸಚಿವರ ರಂಗೋಲಿ ಚಿತ್ರ ರಚಿಸಿದ್ದಾರೆ.  
 
 
 
ಪೌರೋಹಿತ್ಯ ಜೊತೆಗೆ ರಂಗೋಲಿ ಚಿತ್ರಕಲೆಗೆ ಸಹಕರಿಸಿದ ಮನೆಯವರು ಹಾಗೂ ದೇಶ ವಿದೇಶಗಳಲ್ಲಿನ ಪ್ರೋತ್ಸಾಹಕರನ್ನು ನೆನೆದರು. ರೇಡಿಯೋ ಸಾರಂಗ್'ನ  ನೇರಪ್ರಸಾರದಲ್ಲಿ ಹಲವಾರು ಕೇಳುಗರೊಂದಿಗೆ ಮಾತನಾಡಿದರು.
           
- ಎಡ್ವರ್ಡ್ ಲೋಬೊ , ರೇಡಿಯೋ ಸಾರಂಗ್