Somanath Sankolige: ಖುಷಿ ತಂದ ತೆರೆಮರೆಯ ಬದುಕು

ನಾಟಕದ ಪರದೆ ಎಳೆಯುವ ಮೂಲಕ ಎಳೆಯ ವಯಸ್ಸಿನಲ್ಲಿ ನನ್ನ ಕಲಾಬದುಕು ಅರಳಿತು. ದರ್ಣಪ್ಪ ಮಾಸ್ಟರ್, ಗೋಪಾಲ ಮಾಸ್ಟರ್ ಅವರಿಂದ ರಂಗವೇರಿದ ನಾನು ವಿವಿಧ ಕಲಾಪ್ರಕಾರವನ್ನು ಅರಿತರೂ ಈ ತೆರೆ ಮರೆಯ ಬದುಕು ನನಗೆ ಖುಷಿ ತಂದಿದೆ ಎಂದು ಬಹುಮುಖ ಪ್ರತಿಭೆ ಸೋಮನಾಥ  ಸಂಕೊಳಿಗೆ ನುಡಿದರು. ಅವರು ಡಿಸೆಂಬರ್ 6 ರಂದು ರೇಡಿಯೋ ಸಾರಂಗ್ ನ ಹೃದಯರಾಗ ನೇರ ಪ್ರಸಾರ ಕಾರ್ಯಕ್ರಮ ದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ತೆರೆಮರೆಯಲ್ಲಿದ್ದ ತನ್ನಲ್ಲಿ ಒಂದೊಂದಾಗಿ ನಾಟಕ ರಂಗದ ವಿವಿಧ ಪ್ರಕಾರಗಳಲ್ಲಿ ಒಲವು ಮೂಡಿತು. ಕೃಷ್ಣ ಮಾಸ್ಟರ್ ಉಡುಪು ತಯಾರಿಕೆ ಮೇಕಪ್ ಬಗ್ಗೆ ತಿಳಿಸಿದರೆ ಬಳಿಕ ಸಂಗೀತ ನಿರ್ದೇಶನದಲ್ಲೂ ಸೈ ಅನಿಸಿದೆ. ವಿಸ್ಮಯ್ ವಿನಾಯಕ್ ಇವರ ತಮಾಷೆ ಫ್ಯಾಕ್ಟರಿ ತಂಡದ ಜೊತೆ ಮಜಾಭಾರತ, ದೈಜಿವರ್ಲ್ಡ್ ನ ಹಾಸ್ಯ ಕಾರ್ಯಕ್ರಮ, ಶ್ರೀಲಲಿತೆ ತಂಡದ ನಾಟಕಗಳಿಗೆ ಸಂಗೀತ ನಿರ್ದೇಶನ ಮಾಡಿದ್ದೇನೆ ಎಂದರು. ಇದಲ್ಲದೆ ವೃತ್ತಿಯಾಗಿ ಕುಶನ್ ವರ್ಕ್ಸ್  ಮಾಡುತ್ತಿರುವೆ ಎಂದು ತಿಳಿಸಿದರು. ಈಗಲೂ ರಾಜ್ಯಾದ್ಯoತ ಕಾರ್ಯಕ್ರಮ ಗಳಲ್ಲಿ ಭಾಗವಹಿಸುತ್ತಿದ್ದು ತನ್ನೆಲ್ಲಾ ಚಟುವಟಿಕೆಗಳಿಗೆ ಸಹಕರಿಸುವ ಮಡದಿ, ಮಗ ಹಾಗೂ  ಉಡುಪು ಹೊಲಿಯುವ ಹರೀಶ್ ಅವರನ್ನು ನೆನಪಿಸಿಕೊಂಡರು. ಹಿಂದೆ ಪರದೆ ಹೊತ್ತುಕೊಂಡು ಹೊಟ್ಟೆಗಿಲ್ಲದೆ ಕಷ್ಟಪಟ್ಟ ದಿನಗಳನ್ನು ನೆನೆದ ಇವರು  ಈಗ ಆರ್ಥಿಕ ಪರಿಸ್ಥಿತಿ ಸುಧಾರಿಸಿದೆ ಎಂದರು. ಹಲವಾರು ಹೊಸ ಪ್ರತಿಭೆಗಳಿಗೆ ಸಂಗೀತ, ಮೇಕಪ್ ತರಬೇತಿ ನೀಡುತ್ತಿದ್ದು ಅವರು ಹೆಸರು ಮಾಡಿದಾಗ ನನಗೆ ಸಂತಸವಾಗುತ್ತಿದೆ ಎಂದರು.

7ನೇ ತರಗತಿಯಿಂದ ಆರಂಭಗೊಂಡ ಕಲಾಸೇವೆ ಕಳೆದ 30 ವರ್ಷದಿಂದ  ಮುಂದುವರಿದಿದ್ದು, ಸಮಾಜ ಕಲಾವಿದನೆಂದು ಗುರುತಿಸಿದಾಗ ಸಾರ್ಥಕತೆ ಮನದಲ್ಲಿ ಮೂಡುತ್ತದೆ ಎಂದ ಇವರು ಹಲವಾರು ಕೇಳುಗರ ಕರೆಗಳಿಗೆ ಉತ್ತರಿಸಿದರು.

- ಎಡ್ವರ್ಡ್ ಲೋಬೊ, ರೇಡಿಯೋ ಸಾರಂಗ್