Sadashiva Talapady: ಪರಿಮಿತಿಯೊಳಗಿನ ಪಾತ್ರ ನಿರ್ವಹಣೆ ನನಗೆ ಪ್ರಸಿದ್ದಿ ತಂದಿತು: ಯಕ್ಷಗಾನ ಕಲಾವಿದ  ಸದಾಶಿವ  ತಲಪಾಡಿ

ಪರಿಮಿತಿಯೊಳಗಿನ ಪಾತ್ರ ನಿರ್ವಹಣೆ ಯಕ್ಷಗಾನ ರಂಗದಲ್ಲಿ ನನ್ನ ಉನ್ನತ ಬೆಳವಣಿಗೆಗೆ ಕಾರಣವಾಯಿತು, ಎಂದು ಯಕ್ಷಗಾನ ಕಲಾವಿದ ಪ್ರಸಂಗಕರ್ತ ತುಳು ವಿದ್ವಾಂಸ ಸದಾಶಿವ ಆಳ್ವ ತಲಪಾಡಿ  ನುಡಿದರು.

ಮಾರ್ಚ್ 23ರಂದು ಬುಧವಾರ ರೇಡಿಯೋ ಸಾರಂಗ್'ನ  ಹೃದಯರಾಗ  ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಮನೆಯಲ್ಲಿದ್ದ  ಟೇಪ್ ರೆಕಾರ್ಡಿನಲ್ಲಿ ಕೇಳುತಿದ್ದ ಶೇಣಿ,  ಸಾಮಗ ಮೊದಲಾದ ಯಕ್ಷ ದಿಗ್ಗಜರ ಯಕ್ಷಗಾನದ  ಕ್ಯಾಸೆಟ್'ಗಳು ಯಕ್ಷಗಾನ ಆಸಕ್ತಿ ಚಿಗುರಿಸಿದವು. ಊರಿನ ಗದ್ದೆಯಲ್ಲಿ ನಡೆಯುತ್ತಿದ್ದ ಯಕ್ಷಗಾನ ಪ್ರದರ್ಶನಗಳು ಯಕ್ಷಗಾನ ಪ್ರವೇಶಕ್ಕೆ ಮುನ್ನುಡಿ ಬರೆದವು. ಸಾಲದಕ್ಕೆ ನಮ್ಮ ಮನೆಯೇ ಯಕ್ಷದೇಗುಲವಾಗಿತ್ತು. ತಂದೆ ಆನಂದ ಆಳ್ವ ತಾಯಿ ದೇವಕಿ ಆಳ್ವ, ನಾಲ್ವರು ಅಣ್ಣಂದಿರು, ಅಕ್ಕ, ತಮ್ಮ ಎಲ್ಲರೂ ಯಕ್ಷಪ್ರಿಯರು. ಇದು ಯಕ್ಷಗಾನದ  ಸಾಪಲ್ಯಸೇವೆಗೆ ನನ್ನಅಣಿಗೊಳಿಸಿತು; ಯಕ್ಷಗಾನದ ಧೀಮಂತ ನಡೆಗೆ ಪ್ರೇರೇಪಿಸಿತು, ಎಂದು ಮಾರ್ಮಿಕವಾಗಿ ನುಡಿದರು.

ಅಜೆಕಾರು ಬಾಲಕೃಷ್ಣ ಶೆಟ್ಟಿಯವರು ಕಲಿಸಿದ ಯಕ್ಷಗಾನದ ಪಾಠ ಎರೆದ ಜ್ಞಾನಧಾರೆ  ನನ್ನನ್ನು ಪ್ರಬುಧ್ಧನನ್ನಾಗಿ ಮಾಡಿತು. 'ಸುದರ್ಶನ ವಿಜಯ' ಪ್ರಸಂಗದಲ್ಲಿ ಮಾಡಿದ ಮೊದಲ ಬಣ್ಣದ ವೇಷ 'ಶತ್ರುಪ್ರಸೂದನ' ಜನಮೆಚ್ಚುಗೆಯೊಂದಿಗೆ ಕಲಾವಿದನಾಗಿ ಗುರುತಿಸುವಂತೆ ಮಾಡಿತು, ಎಂದರು.

ತಲಪಾಡಿ ದೇವಿಪುರ ಇವರ ಊರು. ವೃತ್ತಿಯಲ್ಲಿ ಕೋಳಿ ಸಾಕಾಣಿಕೆ ಹಾಗೂ ಕೃಷಿ ಮಾಡುತ್ತಾ ಜೀವನ ಸಾಗಿಸುತ್ತಿರುವ ಇವರು ಪ್ರವಚನಕಾರ, ಧಾರ್ಮಿಕ ಉಪನ್ಯಾಸಕರಾಗಿ ಖ್ಯಾತಿ ಪಡೆದಿದ್ದಾರೆ. 'ಭಾರತೀಯ ಚಿಂತನ ವಿಧಾನ' ಎಂಬ ಪುಸ್ತಕ, 'ಬಾಮುಲ್ಲ ಬಾಮಕುಮಾರೆ', 'ಉಸುಲು ಸೊಂಕೆಲೇ' ಎನ್ನುವ ತುಳು ಪ್ರಸಂಗಗಳನ್ನೂ ರಚಿಸಿದ್ದಾರೆ. ಕೊರಗಜ್ಜ, ದಿಣ್ಣ ತುಳು ಪಾತ್ರ, ಶನಿಪೂಜೆಯ ವಿಕ್ರಮಾದಿತ್ಯನ ಪಾತ್ರ ಹೆಚ್ಚಿನ ಜನಪ್ರಿಯತೆಯನ್ನು ನೀಡಿದೆ, ಎಂದರು.

ಯುವಜನತೆ ಯಕ್ಷರಂಗದತ್ತ ಲಕ್ಷ್ಯವಹಿಸಿದರೆ ಇನ್ನಷ್ಟು ಯಕ್ಷಗಾನದ ಪ್ರಸರಣ ಸಾಧ್ಯವೆಂದರು. ಪಾತ್ರಧಾರಿಗಳು ವೈಯುಕ್ತಿಕ ವರ್ಚಸ್ಸು ಹೆಚ್ಚಿಸಲು ಪಾತ್ರ ಕಳಾಹೀನಾವಾಗುವಂತೆ ಮಾಡುತ್ತಿರುವುದು ಯಕ್ಷಗಾನದ  ಆಶಯಕ್ಕೆ ಅಹಿತಕಾರಿಯಾಗಿದೆ, ಎಂದು ಕಳವಳ ವ್ಯಕ್ತಪಡಿಸಿದರು.

ನೇರಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಖುಷಿಪಟ್ಟ ಇವರು ಹಲವಾರು ಕೇಳುಗರ ಕರೆಗೆ ಉತ್ತರಿಸಿದರು.

- ಎಡ್ವರ್ಡ್ ಲೋಬೋ, ರೇಡಿಯೋ ಸಾರಂಗ್