Dr. Sadashiva Rao: ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಇರಲಿ

ಮಕ್ಕಳ ಆರೋಗ್ಯ ಬಹಳ ಸೂಕ್ಷ್ಮವಾಗಿರುತ್ತದೆ. ಅವರ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವಾದರೂ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಅಲ್ಲದೇ, ತಮಗೆ ಏನಾಗುತ್ತಿದೆ ಎಂಬುದನ್ನ ಹೇಳಲು ಅವರಿಗೆ ತಿಳಿಯುವುದಿಲ್ಲ. ಹಾಗಾಗಿ ನಿಮ್ಮ ಮಕ್ಕಳಲ್ಲಿ ಆರೋಗ್ಯದ ವ್ಯತ್ಯಾಸದ ಬಗ್ಗೆ ಗಮನಿಸಿ ಆ ಸಮಯದಲ್ಲಿ ಅವರು ಅನಾರೋಗ್ಯಕ್ಕೆ ಒಳಗಾಗಿದ್ದಲ್ಲಿ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ ಎಂದು ಜಿಲ್ಲಾ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯ ಮಕ್ಕಳ ಶಸ್ತ್ರ ಚಿಕಿತ್ಸಾ ತಜ್ಞರಾದ ಡಾ. ಸದಾಶಿವ ರಾವ್ ಹೇಳಿದರು. ಇತ್ತೀಚೆಗೆ ಇವರು ರೇಡಿಯೋ ಸಾರಂಗ್ ನಲ್ಲಿ ನಡೆದ ಹಲೋ ವೆನ್ಲಾಕ್ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. 

ಗರ್ಭಧಾರಣೆಯಿಂದ ಹುಟ್ಟಿನವರೆಗೆ ಹಾಗೂ ಹುಟ್ಟಿನಿಂದ ಮಗುವಿಗೆ ಐದು ವರ್ಷವಾಗುವವರೆಗೆ ಮಗುವಿನ ಆರೋಗ್ಯದ ಮೇಲೆ ನಿಗಾ ವಹಿಸುವುದೇ ಮಗುವಿನ ಆರೋಗ್ಯ ಕಾಳಜಿ ಎಂದು ಹೇಳಲಾಗುತ್ತದೆ. ಹೀಗಾಗಿ ಮಕ್ಕಳ ಆರೋಗ್ಯವನ್ನು ಕಾಪಾಡುವಲ್ಲಿ ಪೋಷಕರ ಪಾತ್ರ ಮಹತ್ವದ್ದು ಎಂಬುದನ್ನು ಪೋಷಕರು ಅರ್ಥಮಾಡಿಕೊಳ್ಳಬೇಕು. ಮಕ್ಕಳಿಗೆ ಶುಚಿತ್ವ, ಆರೋಗ್ಯದ ಬಗೆಗಿನ ಸೂಕ್ಷ್ಮ ವಿಚಾರಗಳನ್ನು ಮಕ್ಕಳಿಗೆ ತಿಳಿಸಿ ಕೊಡುವುದು ಮುಖ್ಯವಾಗಿರುತ್ತದೆ. ಸಾಮಾನ್ಯವಾಗಿ ಶಾಲೆಗೆ ಹೋಗುವ ಚಿಕ್ಕ ಮಕ್ಕಳು ವರ್ಷದಲ್ಲಿ ಹಲವಾರು ಬಾರಿ ಶೀತ, ಜ್ವರದ ತೊಂದರೆಗೆ ಒಳಗಾಗುತ್ತಾರೆ. ಅದಕ್ಕೆ ಹೆದರದೆ, ಸರಿಯಾದ ಚಿಕಿತ್ಸೆ ಮತ್ತು ಆರೈಕೆ ಮೊದಲ ಆದ್ಯತೆಯಾಗಿರಲಿ ಎಂದು ಕೇಳುಗರಿಗೆ ಕಿವಿಮಾತು ಹೇಳಿದರು.

ಇಂದಿನ ಹವಾಮಾನ ಬದಲಾವಣೆ ಸಂದರ್ಭದಲ್ಲಿ ಕೂಡ ಮಕ್ಕಳು ಅನಾರೋಗ್ಯ ಪೀಡಿತರಾಗುತ್ತಿದ್ದಾರೆ . ಕಲುಷಿತ ನೀರು ಕುಡಿಯುವುದು, ಸ್ವಚ್ಛತೆಯ ಕೊರತೆಯಿಂದಾಗಿ ದೇಹದಲ್ಲಿ ಪ್ರತಿರೋಧಕ ಶಕ್ತಿ ಕಡಿಮೆಯಾಗುತ್ತಿರುತ್ತದೆ . ಇದನ್ನು ತಪ್ಪಿಸಲು ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಬೇಕು. ಸ್ವಚ್ಛತೆ ಕಡೆಗೆ ಮಕ್ಕಳು ಹೆಚ್ಚು ಗಮಹರಿಸುವಂತೆ ನೋಡಿಕೊಳ್ಳಬೇಕು.   ಮಕ್ಕಳು ಸದಾ ಚಟುವಟಿಕೆಯಿಂದ ಇದ್ದರೆ ಹೆಚ್ಚು ಆರೋಗ್ಯವಂತರಾಗಿರುತ್ತಾರೆ. ಚಟುವಟಿಕೆ ಇಲ್ಲದಿದ್ದರೆ ಜಡತ್ವದಿಂದ ಅವರ ದೇಹಕ್ಕೂ ಅನೇಕ ಅನಾರೋಗ್ಯ ಸಮಸ್ಯೆಗಳು ಕಾಡುತ್ತದೆ ಎಂದು ತಿಳಿಸಿದರು.

ಇದೇ ಸoರ್ಭದಲ್ಲಿ ಅನೇಕ ಕೇಳುಗರು ಕರೆ ಮಾಡಿ ತಮ್ಮ ಪ್ರಶ್ನೆಗಳನ್ನು ಕೇಳಿದರು. ವೈದ್ಯರು ಸೂಕ್ತವಾಗಿ ಉತ್ತರಿಸಿದರು.

- RJ Saifulla