ಈ ಬಾರಿಯ ಹಲೋ ವೆನ್ಲಾಕ್ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಜನವರಿ 14ರಂದು ಸರಕಾರಿ ವೆನ್ಲಾಕ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಶಸ್ತ್ರಚಿಕಿತ್ಸಾ ತಜ್ಞರಾಗಿರುವ ಡಾ. ವಿಶ್ರಂಕ ಎಸ್ ಐತಾಳ್ ಭಾಗವಹಿಸಿ ಅಪೆಂಡಿಸೈಟಿಸ್ ರೋಗಕ್ಕೆ ಸಂಭಂಧಪಟ್ಟು ಮಾತನಾಡಿದರು. ಆರಂಭದಲ್ಲಿ ಅಪೆಂಡಿಕ್ಸ್ ಈ ಪುಟ್ಟ ಅಂಗಾಂಗದ ಬಗ್ಗೆ ವಿವರಿಸಿ ಎಂದಾಗ , ಇದು ನಮ್ಮ ದೇಹದ ಸಣ್ಣ ಮತ್ತು ದೊಡ್ಡ ಕರುಳು ಸೇರುವ ಜಾಗದಲ್ಲಿ ಒಂದು ಚಿಕ್ಕ ಚೀಲದಂತಹ ರಚನೆಯ ಭಾಗ. ಸಾಮಾನ್ಯ 6ಸೆಂ.ಮೀ ನಿಂದ 8ಸೆಂ.ಮೀ ನಷ್ಟು ಇರುತ್ತದೆ. ಇದಕ್ಕೆ ನಾವು ಅಪೆಂಡಿಕ್ಸ್ ಎನ್ನುತ್ತೇವೆ. ಇದರ ಒಳಗಡೆ ಸೇರಿಕೊಳ್ಳುವ ಅಥವಾ ಉತ್ಪತ್ತಿಯಾಗುವ ಜಿಡ್ಡು ಪದಾರ್ಥಗಳು ಆಗಿಂದಾಗ್ಗೆ ಹೊರಬಂದು ಕರುಳಿನಲ್ಲಿ ಬೆರೆತು ಹೋಗುತ್ತವೆ. ಒಂದುಕಡೆ ಮಲವು ಗಟ್ಟಿಯಾದ ಕಲ್ಲಿನಂತಾಗಿ ಅಲ್ಲೇ ಉಳಿಯುತ್ತೆ. ಕೆಲವೊಮ್ಮೆ ಗಾಲ್‌ಸ್ಟೋನ್ ಹಾಗೂ ಜಂತುಗಳು (ಪಿನ್‌ವರ್ಮ್) ಸಹ ಅಡಚಣೆಯನ್ನುಂಟು ಮಾಡಬಹುದು. ಈ ಪ್ರಕ್ರಿಯೆಯಿಂದಾಗಿ ಅಪೆಂಡಿಕ್ಸ್ ಊದಿಕೊಂಡು ಅಪೆಂಡಿಸೈಟಿಸ್’ಗೆ ಕಾರಣವಾಗುತ್ತದೆ. ಆದರೆ ಈ ರೀತಿ ಊದಿಕೊಳ್ಳಲು ನಿರ್ದಿಷ್ಟ ಕಾರಣಗಳು ಇದುವರೆಗೆ ಗೊತ್ತಾಗಿಲ್ಲ. ಇದು ಸುಮಾರು ಶೇ. 50ರಷ್ಟು ಜನರಲ್ಲಿ, ಅದರಲ್ಲೂ ಮೂವತ್ತು ವರ್ಷದ ಒಳಗಿನವರಿಗೆ ಈ ರೋಗ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಆಹಾರದಲ್ಲಿನ ನಾರಿನ ಅಂಶದ ಕೊರತೆ, ಅತಿಯಾದ ಕೊಬ್ಬು ಹಾಗೂ ಪಿಷ್ಟ ಪದಾರ್ಥಗಳ ಸೇವನೆ ಸಹ ಇದಕ್ಕೆ ಒಂದು ಕಾರಣವಾಗಿರಬಹುದು ಎಂದರು.