ಹೃದಯರಾಗ ಕಾರ್ಯಕ್ರಮದಲ್ಲಿ ಹಳ್ಳಿಮದ್ದು ಪ್ರವೀಣೆ

“ವಿವಿಧ ರೋಗಗಳನ್ನು ಗುಣಪಡಿಸುವ ಶಕ್ತಿ ಔಷಧೀಯ ಗಿಡಗಳಿಗಿವೆ. ವೈದ್ಯರನ್ನು ದೂರವಿರಿಸಲು ಹಿತ್ತಲಿನಲ್ಲಿಯ ಔಷಧಿ ಗಿಡಗಳನ್ನು ಬೆಳೆಸಿದರೆ ರೋಗಮುಕ್ತ ಜೀವನ ನಮ್ಮದಾಗುತ್ತೆ. ನನ್ನ ಆರೋಗ್ಯಕ್ಕೆ ನಾನು ಬೆಳೆಸಿದ ಔಷಧಿ ಗಿಡಗಳೇ ಕಾರಣ,” ಎಂದು ಶಿಕ್ಷಕಿ, ಹಳ್ಳಿಮದ್ದು ಹಾಗೂ ಕರಕುಶಲ ಪ್ರವೀಣೆ ಯಶೋಧ ಪಿ. ನುಡಿದರು. ಅವರು ಅಕ್ಟೊಬರ್ 13ರಂದು ರೇಡಿಯೋ ಸಾರಂಗ್’ನ ಹೃದಯರಾಗ ನೇರಪ್ರಸಾರ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಪುತ್ತೂರಿನ ನಿವಾಸಿಯಾದ ಯಶೋಧ ಅವರು ಮೂಲತ: ಕೃಷಿ ಹಿನ್ನೆಲೆಯ ಕುಟುಂಬದಿಂದ ಬಂದ ಮಣ್ಣಿನ ಮಗಳು. ಶಿಕ್ಷಕ ವೃತ್ತಿಯ ಜತೆಗೆ ಹಲವಾರು ಪ್ರವೃತ್ತಿಗಳನ್ನು ಒಗ್ಗೂಡಿಸಿಕೊಂಡ ಇವರು ಭತ್ತದ ತೆನೆಯ ತೋರಣ, ಗೂಡುದೀಪ ತಯಾರಿ, ಬಿದಿರು, ಚಿಂದಿಬಟ್ಟೆ ಇತರ ತ್ಯಾಜ್ಯ ವಸ್ತುಗಳಿಂದ ಕರಕುಶಲ ವಸ್ತುಗಳನ್ನು ಸೃಷ್ಟಿಸುತ್ತಾರೆ. ವಿವಿಧ ರೀತಿಯ ಔಷಧಿ ಗಿಡಗಳನ್ನು ಬೆಳೆಸಲು, ಔಷಧಿಯನ್ನು ತಯಾರಿಸಲು ಇವರಿಗೆ ಇವರ ಅಜ್ಜಿಯೇ ಪ್ರೇರಣೆ, ಎಂದರು. ಹೊಸ ಬಗೆಯ, ಹೊಸ ರುಚಿಯ ಪದಾರ್ಥ ತಿಂಡಿಯನ್ನು ಮಾಡುವುದು ಇವರ ಆಸಕ್ತಿಗಳಲ್ಲೊಂದು. ಇವರ ಮನಸ್ಸು ಆಸಕ್ತಿಯ ಅರಮನೆಯೆಂದರೂ ತಪ್ಪಿಲ್ಲ.

“ವಿವಿಧ ಕ್ರಿಯಾತ್ಮಕತೆಯನ್ನು ನಾನು ನನ್ನ ಅಣ್ಣನಿಂದ ನೋಡಿ ಕಲಿತೆ. ಯಾವುದೇ ವಸ್ತು ಸಮಯ ದುರುಪಯೋಗಪಡಿಸುವುದೆಂದರೆ ನನಗೆ ಅಸಾಧ್ಯ,” ಎಂದು ನುಡಿದರು.

ಸಮಾಜ ಸೇವೆ ಇವರ ಇನ್ನೊಂದು ಪ್ರವೃತ್ತಿ. ಹಲವಾರು ಕರ್ಯಾಗಾರ, ಸಂವಾದದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸುತ್ತಾರೆ. ಕಟೀಲು ದುರ್ಗಾಪರಮೇಶ್ವರಿ ಹಾಗೂ ಪುತ್ತೂರು ಮಹಾಲಿಂಗೇಶ್ವರ ಮುಂತಾದ 25 ದೇವಸ್ಥಾನಗಳಿಗೆ, ಮತ್ತು ಹಲವಾರು ಮನೆಗಳಿಗೆ ಉಚಿತವಾಗಿ ಇವರು ಭತ್ತದ ತೋರಣ ಮಾಡಿ ಶೃಂಗರಿಸಿದ್ದಾರೆ. ಇವರ ಮನೆಗೆ ಬಂದವರಿಗೆ ಇವರು ಉಚಿತ ಕರಕುಶಲ ವಸ್ತುಗಳು, ಔಷಧಿ, ಔಷಧೀಯ ಗಿಡಗಳನ್ನು ನೀಡಿ ಸತ್ಕರಿಸುತ್ತಾರೆ.

“ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಶ್ರೀ ವಿರೇಂದ್ರ ಹೆಗ್ಗಡೆಯವರಿಂದ ಬೆಳ್ಳಿಯ ನಾಣ್ಯದ ಜೊತೆ ಪಡೆದ ಸನ್ಮಾನ, ಕಟೀಲು ಹಾಗೂ ಹುಟ್ಟೂರಿನ ಮಹಾಲಿಂಗೇಶ್ವರ ದೇವಸ್ಥಾನದ ವತಿಯಿಂದ ಪಡೆದ ಸನ್ಮಾನ, ಗೌರವ ನನ್ನ ಜೀವನದ ಅಪೂರ್ವ ಕ್ಷಣಗಳಲ್ಲೊಂದು,” ಎಂದು ನೆನದರು.

ಸದ್ದಿಲ್ಲದೆ ಸತ್ಕಾರ್ಯ ಮಾಡುವ ಇವರನ್ನು ಪತ್ರಿಕೆ ಮಾದ್ಯಮಗಳು ಗುರುತಿಸಿವೆ. ರೇಡಿಯೋ ಸಾರಂಗ್’ನ ಹೃದಯರಾಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ಹಾಡುಗಳನ್ನು ಹಾಡಿ ಯಶೋಧ ಅವರು ಕೇಳುಗರೊಂದಿಗೆ ಸಂವಹನ ನಡೆಸಿದರು.

- ಎಡ್ವರ್ಡ್ ಲೋಬೋ, ರೇಡಿಯೋ ಸಾರಂಗ್